ಬಲ್ಲಾಳ- ಹೊಯ್ಸಳ ರಾಜಸಂತತಿಯಲ್ಲಿ ಈ ಹೆಸರಿನ ನಾಲ್ವರಿದ್ದರು.

ಬಲ್ಲಾಳ I: ಆಳ್ವಿಕೆ 1101-1107. ಎರಡನೆಯ ವಿನಯಾದಿತ್ಯನ ಮಗನಾದ ಯುವರಾಜ ಎರೆಯಂಗನ ಹಿರಿಯ ಮಗ. ಎರೆಯಂಗ ಅಕಾಲ ಮರಣಕ್ಕೆ ತುತ್ತಾದ್ದರಿಂದ ವಿನಯಾದಿತ್ಯನ ತರುವಾಯ ಈತ 1101ರಲ್ಲಿ ಪಟ್ಟಕ್ಕೆ ಬಂದ. ಅಧಿಕಾರ ವಹಿಸಿಕೊಂಡ ಅನಂತರ ತನ್ನ ಪೂರ್ವಿಕರ ನೆಲೆವೀಡಾಗಿದ್ದ ಸೊಸೆಕಪುರಕ್ಕೆ ಭೇಟಿಯಿತ್ತು ಅಲ್ಲಿಯ ದೇವಾಲಯಗಳಿಗೆ ಪೂಜೆಸಲ್ಲಿಸಿ ಮಾನ್ಯಗಳನ್ನು ನೀಡಿದ. ತನ್ನ ತಾತನಂತೆಯೇ ಕಲ್ಯಾಣಿ ಚಾಳುಕ್ಯರ ಸಾಮಂತವಾಗಿ ತ್ರಿಭುವನದೇವ ಎಂಬ ಬಿರುದನ್ನು ಧರಿಸಿದ. ಚೆಂಗಾಳ್ವರೊಡನೆ ಯುದ್ಧ ಹೂಡಿ ಜಯಗಳಿಸಿದ. ಇವನು ಉಚ್ಚಂಗಿ ಪಾಂಡ್ಯ ಮನೆತನದ ರಾಜನನ್ನು ಸೋಲಿಸಿ ರಾಜ್ಯ ವಿಸ್ತರಿಸಿದುದಾಗಿ ಶಾಸನಗಳಿಂದ ವೇದ್ಯವಾಗುತ್ತದೆ. ಇವನ ಆಳ್ವಿಕೆಯ ಕಾಲದ ಮತ್ತೊಂದು ಪ್ರಮುಖ ಘಟನೆಯೆಂದರೆ ಹೊಯ್ಸಳ ರಾಜಧಾನಿಯ ಮೇಲೆ ಜಗದೇವನ ಆಕ್ರಮಣ. ಜಗದೇವ ಮಾಳವದ ರಾಜನಾಗಿದ್ದನೆಂದು ಹೇಳಲಾಗಿದೆ. ಅವರೆ ಮಾಳವದಿಂದ ಕಲ್ಯಾಣಿ ಸಾಮ್ರಾಜ್ಯವನ್ನು ಹಾದು ಈ ಆಕ್ರಮಣಕಾರ ದೋರಸಮುದ್ರದವರೆಗೆ ಬಂದನೆಂಬುದು ಸಂದೇಹಾಸ್ಪದ. ಆದ್ದರಿಂದ ಈ ಜಗದೇವನೆಂಬುವನು ಪೊಂಬುರ್ಚದ ಶಾಂತಾರ ರಾಜನಾಗಿರಬೇಕೆಂದು ಊಹಿಸಲಾಗಿದೆ. ಬಲ್ಲಾಳ ತನ್ನ ಅನುಜ ವಿಷ್ಣುವರ್ಧನನೊಡಗೂಡಿ ಶತ್ರುವನ್ನು ಸೋಲಿಸಿ ಹಿಮ್ಮೆಟ್ಟಿಸಿದ.

ಬಲ್ಲಾಳನಿಗೆ ಮಕ್ಕಳಿರಲಿಲ್ಲವಾದ್ದರಿಂದ ತನ್ನ ಜೈನ ದಂಡನಾಯಕರಲ್ಲೊಬ್ಬನಾದ ಮರಿಯಾನೆ ಎಂಬುವನ ಮೂವರು ಕುಮಾರಿಯರಾದ ಪದ್ಮಲ, ಚಾಮಲ ಮತ್ತು ಬೊಮ್ಮಲ ಇವರನ್ನು ಒಂದೇ ಮುಹೂರ್ತದಲ್ಲಿ ವರಿಸಿ ಕನ್ಯೆಯರ ಮಾತಾಪಿತರಿಗೆ ನಾಗಮಂಗಲ ತಾಲ್ಲೂಕಿನ ಸಿಂದಗೆರೆ ಎಂಬ ಗ್ರಾಮವನ್ನು ದತ್ತಿಯಾಗಿ ನೀಡಿದ. ಒಂದು ಹೇಳಿಕೆಯ ಪ್ರಕಾರ ಬಲ್ಲಾಳ ತನ್ನ ಹಿಂದಿನ ಜನ್ಮದ ವೈರಿಯ ಗ್ರಹದೋಷದಿಂದ ಪೀಡಿತನಾಗಿದ್ದ. ಬಲ್ಲಾಳನನ್ನು ಜೈನ ಗುರುವಾದ ಚಾರುಕೀರ್ತಿಪಂಡಿತ ಈ ದೋಷದಿಂದ ಪಾರುಮಾಡಿ ಬಲ್ಲಾಳಜೀವರಕ್ಷಕ ಎಂಬ ಬಿರುದನ್ನು ಪಡೆದ. ಆದರೂ ಬಲ್ಲಾಳ ದೀರ್ಘಕಾಲ ಬದುಕಲಿಲ್ಲ. ಇವನು 1107ರ ಕೊನೆಯ ವೇಳೆಗೆ ಮರಣ ಹೊಂದಿದ. ಇವನ ಕಾಲದ ಸಚಿವರೂ ದಂಡನಾಯಕರೂ ಮುಖ್ಯವಾಗಿ ಜೈನ ಮತಾವಲಂಬಿಗಳಾಗಿದ್ದರು. ಬಲ್ಲಾಳ ಜೈನ ದಂಡನಾಯಕನ ಕನ್ಯೆಯರನ್ನು ವರಿಸಿದ್ದುದರಿಂದ ಮತ್ತು ಜೈನ ಗುರು ಚಾರುಕೀರ್ತಿ ಪಂಡಿತ ಇವನ ಆಸ್ಥಾನಪಂಡಿತ ಹಾಗೂ ವೈದ್ಯನಾಗಿದ್ದುದರಿಂದ ಇವನೂ ತನ್ನ ಪೂರ್ವಿಕರಂತೆ ಜೈನ ಮತಾವಲಂಬಿಯಾಗಿದ್ದನೆಂದು ತಿಳಿದುಬರುತ್ತದೆ. ಆದರೆ ಬಲ್ಲಾಳ ಎಲ್ಲ ಪಂಥಗಳನ್ನೂ ಗೌರವಿಸುತ್ತಿದ್ದ. ಬಲ್ಲಾಳನಿಗೆ ಸಂತತಿಯಿರಲಿಲ್ಲವಾದುದರಿಂದ ಇವನ ಅನಂತರ ಈತನ ತಮ್ಮ ಬಿಟ್ಟದೇವ ವಿಷ್ಣುವರ್ಧನ ರಾಜನಾದ.

ಬಲ್ಲಾಳ II: ಆಳ್ವಿಕೆ 1173-1220. ಒಂದನೆಯ ನರಸಿಂಹನ ಮಗ. ವೀರಬಲ್ಲಾಳನೆಂದು ಇವನು ಖ್ಯಾತನಾಮನಾಗಿದ್ದಾನೆ. 1154ರಲ್ಲಿ ಜನಿಸಿದ. ಯುವರಾಜನಾಗಿದ್ದಾಗಲೇ ತನ್ನ ತಂದೆಯ ಆಡಳಿತ ದೌರ್ಬಲ್ಯದಿಂದ ಬೇಸತ್ತು ಅಸಮಾಧಾನದಿಂದ ದಂಗೆಯೆದ್ದ. ನರಸಿಂಹ ತೀರಿಕೊಂಡಾಗ 1173ರಲ್ಲಿ ಪಟ್ಟಕ್ಕೆ ಬಂದ ಹೊಯ್ಸಳ ರಾಜರಲ್ಲೆಲ್ಲ ಅತ್ಯಂತ ಪರಾಕ್ರಮಿ ಹಾಗೂ ಸಮರ್ಥನೆಂದು ಪ್ರಸಿದ್ಧನಾಗಿರುವ ವೀರಬಲ್ಲಾಳನ 47 ವರ್ಷಗಳ ಆಳ್ವಿಕೆಯ ಕಾಲದಲ್ಲಿ ಹೊಯ್ಸಳ ಸಂತತಿ ದಕ್ಷಿಣ ಭಾರತದಲ್ಲೇ ಪ್ರಬಲ ರಾಜಮನೆತನವಾಯಿತು. ಆಡಳಿತ ವಹಿಸಿದ ಕೂಡಲೇ ತನ್ನ ತಾತನಾದ ವಿಷ್ಣುವರ್ಧನನ ಆಕಾಂಕ್ಷೆಗಳಾಗಿದ್ದ ಸ್ವತಂತ್ರ ಆಳ್ವಿಕೆ ಮತ್ತು ಸಾಮ್ರಾಜ್ಯ ಸ್ಥಾಪನೆಯತ್ತ ಕಾರ್ಯೋನ್ಮುಖನಾದ.

ಇವನು 1173ರಲ್ಲಿ ಚೆಂಗಾಳ್ವರನ್ನು ಸೋಲಿಸಿ ಕೊಡಗು ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡ. 1177ರಲ್ಲಿ ಉಚ್ಚಂಗಿಯ ಪಾಂಡ್ಯರಾಜ ಕಾಮದೇವನನ್ನು ಸೋಲಿಸಿ ಆಶ್ರಿತ ರಾಜನನ್ನಾಗಿ ಮಾಡಿಕೊಂಡ. ಅನಂತರ ಕಳಚುರಿ ಸಂಕಮದೇವನ ಮೇಲೆ ಯುದ್ಧ ಘೋಷಿಸಿದ. ಅವನು 1180ರಲ್ಲಿ ಬಲ್ಲಾಳನೊಡನೆ ಶಾಂತಿಯ ಒಪ್ಪಂದ ಮಾಡಿಕೊಳ್ಳಬೇಕಾಯಿತು. ತುಂಗಭದ್ರಾ ಪ್ರದೇಶ ಹೊಯ್ಸಳರ ವಶವಾಯಿತು. 1184ರ ವೇಳೆಗೆ ಪೊಟ್ಟಿ ಪೊಂಬುರ್ಚದ ಶಾಂತಾರರನ್ನೂ ಆಳ್ವಖೇಡದ ಅರಸನನ್ನೂ ಇವನು ಸೋಲಿಸಿದ. ತುಳುವ ಮನೆತನದ ರಾಜಕುಮಾರಿಯಾದ ತುಳುವಲ ದೇವಿಯನ್ನು ವರಿಸಿದ. 1187ರಲ್ಲಿ ಪುನಃ ಉಚ್ಚಂಗಿಯನ್ನು ಮುತ್ತಿ, ಹಿಂದೆ ತನಗೆ ಅವಿಧೇಯನಾಗಿ ನಡೆದುಕೊಂಡಿದ್ದು ಪಾಂಡ್ಯ ರಾಜನನ್ನು ಕೊಂದು ನೊಳಂಬವಾಡಿ ರಾಜ್ಯವನ್ನು ಹೊಯ್ಸಳ ರಾಜ್ಯಕ್ಕೆ ಸೇರಿಸಿಕೊಂಡನಲ್ಲದೆ ಹಾನುಗಲ್ಲಿನ ಕದಂಬರನ್ನೂ ಸೋಲಿಸಿದ. 1184ರಲ್ಲಿ ಕಳಚುರಿ ಮನೆತನವನ್ನು ಕೊನೆಗೊಳಿಸಿ ಚಾಳುಕ್ಯ ಮನೆತನವನ್ನು ಪುನಃ ಪ್ರತಿಷ್ಠಾಪಿಸಿದ 4ನೆಯ ಸೋಮೇಶ್ವರ ದುರ್ಬಲನಾಗಿದ್ದ. ಬಲ್ಲಾಳ 1189ರಲ್ಲಿ ಉತ್ತರದತ್ತ ದಂಡೆತ್ತಿ ಹೋಗಿ ಕಲ್ಯಾಣವನ್ನು ಆಕ್ರಮಿಸಿ ಹೊಯ್ಸಳರ ಆಳ್ವಿಕೆಯನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿದ.

ಅನಂತರ ಕುಂತಳ ಸಾಮ್ರಾಜ್ಯದ ಒಡೆತನಕ್ಕಾಗಿ ದೇವಗಿರಿಯ ಸೇವುಣರಾಜ ಇಮ್ಮಡಿ ಭಿಲ್ಲಮನಿಗೂ ಹೊಯ್ಸಳ ಬಲ್ಲಾಳನಿಗೂ ಯುದ್ಧ ಸಂಘಟಿಸಿತು. 1191ರ ವೇಳೆಗೆ ಸೇವುಣ ಸೈನ್ಯ ಕಲ್ಯಾಣಿಯನ್ನು ವಶಪಡಿಸಿಕೊಂಡು ಧಾರವಾಡ ಜಿಲ್ಲೆಯ ಗದಗ್ ಮತ್ತು ಸೊರಟೂರಿನವರೆಗೂ ಮುಂದುವರಿಯಿತು. ಆ ವೇಳೆಗೆ ಬಲ್ಲಾಳ ತನ್ನ ರಾಜಧಾನಿಯಿಂದ ದಂಡೆತ್ತಿ ಹೋಗಿ ಇತಿಹಾಸ ಪ್ರಸಿದ್ಧ ಸೊರಟೂರು ಮತ್ತು ಲೊಕ್ಕುಂಡಿ ಕದನಗಳಲ್ಲಿ ಭಿಲ್ಲಮನನ್ನು ಸೋಲಿಸಿ ಅವನ ದಂಡನಾಯಕ ಜೇತುಗಿಯನ್ನು ಕೊಂದ. ಪ್ರಾಣರಕ್ಷಣೆಗಾಗಿ ಓಡುತ್ತಿದ್ದಾಗ ಭಿಲ್ಲಮನೂ ಬಲ್ಲಾಳನಿಂದ ಹತನಾದನೆಂದು ತಿಳಿದುಬರುತ್ತದೆ. ಸೇವುಣರ ಮೇಲಿನ ವಿಜಯದಿಂದ ಹೊಯ್ಸಳ ರಾಜ್ಯ ಹೊಯ್ಸಳ ಸಾಮ್ರಾಜ್ಯವಾಗಿ, ಕರ್ನಾಟಕ ಸಾಮ್ರಾಜ್ಯವಾಗಿ ಪರಿಣಮಿಸಿತ್ತು. ತೆಂಕಣ ಚಕ್ರವರ್ತಿ, ಭುಜಬಲ ಹೊಯ್ಸಳ ಚಕ್ರವರ್ತಿ, ಸೇವುಣ ಬಲ ಸೂರೆಕಾರ ಮೊದಲಾದ ಹಲವಾರು ಬಿರುದುಗಳನ್ನು ವೀರಬಲ್ಲಾಳ ಧರಿಸಿದ. ಬಲ್ಲಾಳನ ಗದುಗಿನ ಶಿಲಾಶಾಸನ ಈ ಯುದ್ಧಕ್ಕೆ ಸಂಬಂಧಿಸಿದ ಮಾಹಿತಿಯನ್ನೊದಗಿಸುತ್ತದೆ.

ಸೇವುಣರನ್ನು ಸೋಲಿಸಿದ ಅನಂತರ ಹೊಯ್ಸಳ ಚಕ್ರವರ್ತಿಯ ವಿರುದ್ಧ ಆ ಹೋರಾಡುವ ಸಾಮಥ್ರ್ಯ ದಕ್ಷಿಣ ಭಾರತದ ಯಾವ ಸಂತತಿಗೂ ಇರಲಿಲ್ಲ. ಆ ವೇಳೆಗೆ ಚೋಳ ಸಾಮ್ರಾಜ್ಯ ಶಿಥಿಲಗೊಂಡು 3ನೆಯ ರಾಜರಾಜ ಚೋಳ ತನ್ನ ಆಶ್ರಿತ ರಾಜರಿಂದ ಪರಾಜಿತನಾಗಿ ತನ್ನ ಸ್ಥಾನದ ಉಳಿವಿಗಾಗಿ ಬಲ್ಲಾಳನ ಸಹಾಯವನ್ನು ಯಾಚಿಸಿದ. ಬಲ್ಲಾಳನ ಸೈನ್ಯ ಯುವರಾಜ ವೀರ ನರಸಿಂಹನ ನೇತೃತ್ವದಲ್ಲಿ ತಮಿಳುನಾಡಿಗೆ ಧಾವಿಸಿ ಚೋಳರಾಜನ ವೈರಿಗಳಾದ ಪಾಂಡ್ಯ, ಮಗಾರ ಮತ್ತು ಇತರರನ್ನು ಸೋಲಿಸಿತು. 3ನೆಯ ರಾಜರಾಜನಿಗೆ ತನ್ನ ಪಿತಾಮಹರಿಂದ ಬಂದಿದ್ದ ಅಧಿಕಾರವನ್ನು ದೊರಕಿಸಿಕೊಡಲಾಯಿತು. ಇದರಿಂದ ಹೊಯ್ಸಳರ ಪ್ರಭುತ್ವದ ಘನತೆ ಹೆಚ್ಚಿತು. ರಾಜ್ಯ ವಿಸ್ತಾರವಾಯಿತು. ತಮಿಳು ಪ್ರದೇಶದ ಮೇಲೆ ಹೊಯ್ಸಳರ ರಾಜಕೀಯ ಪ್ರಭಾವ ಸ್ಥಾಪಿತವಾಯಿತು. ಪಾಂಡ್ಯರಾಜ ಗಜಕೇಸರಿ, ಚೋಳರಾಜ್ಯ ಪ್ರತಿಷ್ಠಾಪನಾಚಾರ್ಯ ಮೊದಲಾದ ಬಿರುದುಗಳನ್ನು ವೀರಬಲ್ಲಾಳ ಧರಿಸಿದ. ಬಲ್ಲಾಳನ ಸಾಮಥ್ರ್ಯದಿಂದಾಗಿ ಹೊಯ್ಸಳ ಸಾಮ್ರಾಜ್ಯ ದಕ್ಷಿಣದಲ್ಲಿ ನೀಲಗಿರಿ ಮತ್ತು ಕೊಯಮತ್ತೂರು ಪ್ರದೇಶದಿಂದ ಉತ್ತರದಲ್ಲಿ ಕೃಷ್ಣಾ ನದಿಯವರೆಗೂ ವಿಸ್ತರಿಸಿತ್ತು. ಇವನು ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಸಮರ್ಥ ಅಧಿಕಾರಿಗಳನ್ನು ನೇಮಿಸಿ ದಕ್ಷ ಆಡಳಿತವನ್ನು ಸ್ಥಾಪಿಸಿದ.

ವೀರ ಬಲ್ಲಾಳನ ಕಾಲದಲ್ಲಿ ಸಾಹಿತ್ಯ ಕಲೆಗಳ ಪುರೋಭಿವೃದ್ಧಿಯೂ ಧಾರ್ಮಿಕ ಸಮಾನತೆಯೂ ಸಾಮಾಜಿಕ ಹಾಗೂ ಆರ್ಥಿಕ ಸುಭಿಕ್ಷತೆಯೂ ಸಾಧಿಸಿದುವು. ಸರ್ವಜ್ಞ ಚಕ್ರವರ್ತಿ, ಶಬ್ದ ವಿದ್ಯಾ ಲಕ್ಷಣ ಸುಶಿಕ್ಷಿತ ಮುಂತಾದ ಬಿರುದುಗಳನ್ನು ಬಲ್ಲಾಳ ಹೊಂದಿದ್ದ. ಇವನು ವಿದ್ವಾಂಸರಿಗೂ, ಸಾಹಿತ್ಯಕ್ಕೂ ವಿಶೇಷ ಪ್ರೋತ್ಸಾಹ ನೀಡಿದ. ಅಗ್ರಹಾರಗಳೂ ಬ್ರಹ್ಮಪುರಿಗಳು ನಿರ್ಮಾಣಗೊಂಡವು. ಕನ್ನಡ ನಾಡಿನ ಸುಪ್ರಸಿದ್ದ ಕವಿಗಳಾದ ಜನ್ನ, ರುದ್ರಭಟ್ಟ, ಅಂಡಯ್ಯ ಮೊದಲಾದವರು ಬಲ್ಲಾಳನ ಸಮಕಾಲೀನರು. ಜನ್ನ ಆಸ್ಥಾನ ಕವಿಯಾಗಿದ್ದು ಬಲ್ಲಾಳನಿಂದ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದ. ಬಲ್ಲಾಳನ ಕಾಲದಲ್ಲಿ ಅನೇಕ ಶ್ರೇಷ್ಠ ಹೊಯ್ಸಳ ದೇವಾಲಯಗಳು ನಿರ್ಮಾಣವಾದುವು. ಇವನು ಬೇಲೂರಿನ ಚೆನ್ನಕೇಶವ ದೇವಾಲಯವನ್ನು ವಿಸ್ತರಿಸಿ ಪರಮ ಸುಂದರ ಕಟ್ಟಡವಾಗಿ ಮಾರ್ಪಡಿಸಿದ. ದೋರಸಮುದ್ರದ ಕೇದಾರೇಶ್ವರ, ಅಮೃತಪುರದ ಅಮೃತೇಶ್ವರ ಬೆಳವಾಡಿಯ ವೀರನಾರಾಯಣ, ಅರಸೀಕೆರೆಯ ಈಶ್ವರ ಮತ್ತು ಹಸ್ರಕೂಟ ಜಿನಾಲಯ, ಹಿರೇಮಗಳೂರಿನ ಕೋದಂಡರಾಮ, ಹೆರಗುವಿನ ಕೀರ್ತಿನಾರಾಯಣ ಮೊದಲಾದವು ಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳಲ್ಲಿ ಹಲವು. ವೀರಬಲ್ಲಾಳ ವೈಷ್ಣವ ಪಂಥಾವಲಂಬಿಯಾಗಿದ್ದು ಪರಮವೈಷ್ಣವ ಚಕ್ರವರ್ತಿ ಎಂಬ ಬಿರುದಿಗೆ ಭಾಜಕವಾಗಿದ್ದರೂ ಇವನು ಶೈವ ಮತ್ತು ಜೈನಪಂಥಗಳಿಗೂ ಸಮಾನವಾದ ಪ್ರೋತ್ಸಾಹ ನೀಡಿದ.

ಪ್ರಜೆಗಳ ಆರ್ಥಿಕ ಮೇಲ್ಮೈಗಾಗಿ ನೂರಾರು ಕೆರೆಗಳು ನಿರ್ಮಾಣವಾದವು. ಇವನು ವ್ಯಾಪಾರ ವ್ಯವಸಾಯಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ. ಕೇರಳ ಮತ್ತು ತಮಿಳುನಾಡಿನ ವರ್ತಕರೂ ಬಲ್ಲಾಳನ ಆಸ್ಥಾನದಲ್ಲಿ ಮನ್ನಣೆ ಗಳಿಸಿದ್ದರು. ಕರ್ನಾಟಕದ ವರ್ತಕರು ಪೌರಸ್ತ್ಯ ಮತ್ತು ಪಾಶ್ಚಾತ್ಯ ರಾಷ್ಟ್ರಗಳೊಡನೆ ವಾಣಿಜ್ಯ ಸಂಪರ್ಕವನ್ನೇರ್ಪಡಿಸಿಕೊಂಡಿದ್ದರು. ವೀರಬಲ್ಲಾಳ ತನ್ನ ಸಾಮಥ್ರ್ಯದಿಂದ ಸಾರ್ಥಕ ಸಾಮ್ರಾಟನೆನಿಸಿ ಮಲೆಪರೊಳ್ ಗಂಡ, ಗಿರಿದುರ್ಗಮಲ್ಲ, ಶನಿವಾರಸಿದ್ಧಿ, ಗಂಡಭೇರುಂಡ, ಶ್ರೀಪೃಥ್ವೀವಲ್ಲಭ, ಭುಜಬಲಹೊಯ್ಸಳ ಚಕ್ರವರ್ತಿ, ಯಾದವ ನಾರಾಯಣ, ತೆಂಕಣ ಚಕ್ರವರ್ತಿ ಮೊದಲಾದ ಬಿರುದುಗಳನ್ನು ಹೊಂದಿದ್ದ. ಈ ಯಶಸ್ವಿ ಹೊಯ್ಸಳ ಸಾಮ್ರಾಟನ ಸಾಧನೆಗಳಿಂದ ಹೊಯ್ಸಳ ಸಂತತಿಗೆ ಬಲ್ಲಾಳ ಸಂತತಿಯೆಂಬ ಮತ್ತೊಂದು ಹೆಸರು ರೂಢನಾಮವಾಯಿತು. ಇವನು ತನ್ನ ಕುಮಾರ ವೀರನರಸಿಂಹನಿಗೆ (1220) ಪಟ್ಟ ಕಟ್ಟಿ ಅನಂತರ ಕೆಲವೇ ತಿಂಗಳುಗಳಲ್ಲಿ ಕೊನೆಯುಸಿರೆಳೆದ.

ಬಲ್ಲಾಳ III: ಆಳ್ವಿಕೆ 1291-1342. ಹೊಯ್ಸಳ ಸಂತತಿಯ ಕೊನೆಯ ದೊರೆ. 3ನೆಯ ನರಸಿಂಹನ ಮಗ. ಇವನು ಪಟ್ಟಕ್ಕೆ ಬಂದಾಗ ಹೊಯ್ಸಳರಾಜ್ಯ ದಾಯಾದಿ ಕಲಹದಿಂದ ಛಿದ್ರಗೊಂಡು ದುರ್ಬಲವಾಗಿತ್ತು. ಸಮರ್ಥ ಹೊಯ್ಸಳ ಚಕ್ರವರ್ತಿಗಳಲ್ಲೊಬ್ಬವಾದ ಈತ ತನ್ನ ಚಿಕ್ಕಪ್ಪ ವೀರರಾಮನಾಥನ ಆಳ್ವಿಕೆಗೆ ಒಳಪಟ್ಟಿದ್ದ ರಾಜ್ಯವನ್ನು ವಶಪಡಿಸಿಕೊಂಡು ಹರಿದು ಹೋಗಿದ್ದ ಹೊಯ್ಸಳ ರಾಜ್ಯವನ್ನು ಒಂದುಗೂಡಿಸಿದ. ರಾಜ್ಯದಲ್ಲಿ ಮನೆಮಾಡಿದ್ದ ಅರಾಜಕತೆಯನ್ನು ಹೋಗಲಾಡಿಸಿ ಅಧೋಗತಿಗಿಳಿದಿದ್ದ ಹೊಯ್ಸಳ ಪ್ರಭುತ್ವವನ್ನು ಪುನಶ್ಚೇತನಗೊಳಿಸಲು ಕಾರ್ಯೋನ್ಮುಖನಾದ. ಇವನ ಆಳ್ವಿಕೆಯ ಕಾಲ ದಕ್ಷಿಣ ಭಾರತದ ಇತಿಹಾಸದಲ್ಲಿ ಅನೇಕ ಪ್ರಮುಖ ಘಟನಾವಳಿಗಳಿಂದ ಕೂಡಿದೆ.

ಇವನು ಇಬ್ಭಾಗವಾಗಿದ್ದ ರಾಜ್ಯವನ್ನು ಒಂದುಗೂಡಿಸಿ ಪ್ರಬಲ ಪ್ರಭುತ್ವವನ್ನು ಸ್ಥಾಪಿಸುವಲ್ಲಿ ಮಗ್ನವಾಗಿ ರಾಜ್ಯದಲ್ಲಿ ಸಂಚಾರ ಕೈಗೊಂಡು, ಮಾಂಡಲಿಕರನ್ನು ಹಿಡಿತಕ್ಕೆ ತಂದು, ಅನಾಯಕತೆಯನ್ನು ಹೋಗಲಾಡಿಸಿ, ಉತ್ತರದತ್ತ ದಂಡೆತ್ತಿ ಹೋದ. ತನ್ನ ತಂದೆಯ ಆಳ್ವಿಕೆಯಲ್ಲಿ ಸೇವುಣರ ವಶವಾಗಿದ್ದ ಚಿತ್ರದುರ್ಗ ಪ್ರದೇಶದಿಂದ ಸೇವುಣ ಸೈನ್ಯವನ್ನು ಓಡಿಸಿ ಅಲ್ಲಿ ಅಧಿಕಾರವನ್ನು ಸ್ಥಾಪಿಸಿದ. ಬಲ್ಲಾಳನ ಸೈನ್ಯಗಳು ತುಂಗಭದ್ರಾ ಪ್ರದೇಶದ ಕಂಪಿಲಿಯನ್ನು ಮುತ್ತಿ ಅದನ್ನು ವಶಪಡಿಸಿಕೊಂಡವು. ಅನಂತರ ಬಲ್ಲಾಳ ತಮಿಳುನಾಡಿನಲ್ಲಿ ಕಳೆದುಹೋಗಿದ್ದ ಹೊಯ್ಸಳರ ಪ್ರಭಾವವನ್ನು ಪುನಃ ಸ್ಥಾಪಿಸಲು ಕಾರ್ಯೋನ್ಮುಖನಾದ. ತಮಿಳುನಾಡಿನಲ್ಲಿದ್ದ ಅನಾಯಕತ್ವ ಬಲ್ಲಾಳನಿಗೆ ಸಹಕಾರಿಯಾಗಿತ್ತು.

ಆದರೆ ಬಲ್ಲಾಳ ತಮಿಳುನಾಡಿಗೆ ಧಾವಿಸಿದ ಅನಂತರ ಸ್ವಲ್ಪ ಕಾಲದಲ್ಲೇ ಹೊಯ್ಸಳ ರಾಜ್ಯಕ್ಕೆ ವಿಪತ್ತು ಕಾದಿತ್ತು. 1310ರಲ್ಲಿ ಅಲ್ಲಾ-ಉದ್-ದೀನನ ದಂಡನಾಯಕನಾದ ಮಲ್ಲಿಕ್-ಕಾಫರ್ ದಕ್ಷಿಣದತ್ತ ದಂಡೆತ್ತಿ ಬಂದು ಸೇವುಣರನ್ನು ಸೋಲಿಸಿ, ಪಾಂಡ್ಯ ರಾಜಧಾನಿ ಮಧುರೆಗೆ ಹೋಗುವ ದಾರಿಯಲ್ಲಿ ಹೊಯ್ಸಳ ರಾಜ್ಯದ ಮೇಲೆ ಆಕ್ರಮಣ ನಡೆಸಿದ. ಅವನ ಸೈನ್ಯ ರಾಜಧಾನಿಯಾದ ದೋರಸಮುದ್ರದ ಹೊರವಲಯವನ್ನು ತಲುಪಿತು. ರಾಜಧಾನಿ ಇನ್ನೇನು ಲೂಟಿಯಾಗುವುದರಲ್ಲಿತ್ತು. ಈ ಸುದ್ದಿ ತಿಳಿದು ವೀರಬಲ್ಲಾಳ ರಾಜಧಾನಿಯತ್ತ ಧಾವಿಸಿ ಆಕ್ರಮಣಕಾರನಿಗೆ ಹೇರಳ ಧನಕನಕವನ್ನು ಕೊಟ್ಟು ಒಪ್ಪಂದವೇರ್ಪಡಿಸಿಕೊಂಡ. ಮಲ್ಲಿಕ್ ಕಾಫರ್ ಮಧುರೆಯನ್ನು ಮುತ್ತಿ ಅಲ್ಲಿಯ ದೇವಾಲಯಗಳ ಸಂಪತ್ತನ್ನು ಸೂರೆ ಮಾಡಿ ದೆಹಲಿಗೆ ಹಿಂದಿರುಗುವಾಗ ಬಲ್ಲಾಳನ ಕುಮಾರನಾದ ವಿಜಯ ವಿರೂಪಾಕ್ಷ ಬಲ್ಲಾಳನನ್ನು ಅಲ್ಲಾ-ಉದ್-ದೀನ್ ಖಿಲ್ಜಿಯ ಆಸ್ಥಾನಕ್ಕೆ ಕಳುಹಿಸಿಕೊಡಬೇಕಾಗಿ ಬಂತು. ಅಲ್ಲ್ಲಾ-ಉದ್-ದೀನ್ ಹೊಯ್ಸಳ ರಾಜಕುಮಾರನನ್ನು ಗೌರವದಿಂದ ಕಂಡು ಅವನಿಗೆ ಹಲವು ಬಹುಮಾನಗಳನ್ನಿತ್ತು ಕಳುಹಿಸಿಕೊಟ್ಟ.

ಉತ್ತರದಿಂದ ತಲೆದೋರಿದ್ದ ಮಹಮದೀಯರ ದಂಡಯಾತ್ರೆಗಳಿಂದ ದಕ್ಷಿಣ ಭಾರತವನ್ನು ಪಾರುಮಾಡಲು ಬಲ್ಲಾಳ ಹವಣಿಸಿದ. ಪ್ರಬಲ ಸಾಮ್ರಾಜ್ಯವೊಂದನ್ನು ಕಟ್ಟಲು ಯತ್ನಶೀಲನಾಗಿ ದೊಡ್ಡ ಸೈನ್ಯವೊಂದನ್ನು ಕಟ್ಟಿ, ತಮಿಳುನಾಡಿನಲ್ಲಿ ಕೈಬಿಟ್ಟು ಹೋಗಿದ್ದ ಪ್ರದೇಶಗಳನ್ನು ಜಯಿಸಿ, ತಿರುಪತಿ, ಶ್ರೀರಂಗಂ, ಕಂಚಿ, ಮೊದಲಾದೆಡೆಗಳಲ್ಲಿ ಸಂಚರಿಸಿ ಸಾಮಂತರನ್ನು ಎಚ್ಚರಿಸಿ ತನ್ನ ಉತ್ತರದ ಗಡಿಗಳಲ್ಲಿ ಬಲವಾದ ಕಾವಲು ಪಡೆಯನ್ನು ನಿಲ್ಲಿಸುವ ಯತ್ನದಲ್ಲಿರುವಾಗ ಮತ್ತೊಂದು ಉಪದ್ರವ ಕಾದಿತ್ತು. 1325ರ ವೇಳೆಗೆ ಖಲ್ಜಿ ಸಂತತಿ ಅಳಿದು, ಅದರ ಸ್ಥಾನದಲ್ಲಿ ಸ್ಥಾಪಿತವಾಗಿದ್ದ ತುಗಲಕ್ ಸಂತತಿಯ ಸುಲ್ತಾನ ಮಹಮದ್-ಬಿನ್-ತುಘಲಕ್ ದಖನ್ನಿನ ಮೇಲೆ ಪ್ರಪ್ರಥಮವಾಗಿ ಸುಲ್ತಾನರ ಆಳ್ವಿಕೆಯನ್ನು ಸ್ಥಾಪಿಸಿದ. ದಂಗೆಯೆದ್ದ ದಖನ್ನಿನ ಪ್ರಾಂತ್ಯಾಧಿಕಾರಿಯನ್ನು ಶಿಕ್ಷಿಸಲು ಮಹಮ್ಮದ್-ಬಿನ್-ತುಘಲಕ್ ಕಳುಹಿಸಿದ ಸೈನ್ಯದಿಂದ ಓರಂಗಲ್ ಮತ್ತು ಕಂಪಿಲಿ ರಾಜಮನೆತನಗಳು ನಿರ್ನಾಮವಾದುವು. ಬಲ್ಲಾಳನ ಆಶ್ರಯವನ್ನು ಯಾಚಿಸಿ ಬಂದ ಬಹಾಉದ್ದೀನನನ್ನು ಸೆರೆಹಿಡಿದು ತುಗಲಕನ ಸೈನ್ಯಾಧಿಕಾರಿಗೆ ಒಪ್ಪಿಸಿ ಬಲ್ಲಾಳ ತನ್ನ ರಾಜ್ಯಕ್ಕೆ ಒದಗಿದ್ದ ವಿಪತ್ತಿನಿಂದ ಪಾರಾದ.

ಈ ಆಕ್ರಮಣಗಳ ಪರಿಣಾಮವನ್ನು ಆಳವಾಗಿ ಗ್ರಹಿಸಿದ ಬಲ್ಲಾಳ ತನ್ನ ಗುರಿಯಾದ ಪ್ರಬಲ ಸಾಮ್ರಾಜ್ಯ ಸ್ಥಾಪನೆಯ ಯತ್ನವನ್ನು ಮುಂದುವರಿಸಿದ. 1339ರಲ್ಲಿ ತುಂಗಭದ್ರಾ ತೀರದಲ್ಲಿ ವಿಜಯ ವಿರೂಪಾಕ್ಷ ಪಟ್ಟಣ ಅಥವಾ ಹೊಸಪಟ್ಟಣ ಎಂಬ ನಗರವನ್ನು ನಿರ್ಮಿಸಿ, ತನ್ನ ಕುಮಾರನಿಗೆ ಪಟ್ಟ ಕಟ್ಟಿದ. ಈ ಹೊಸ ಪಟ್ಟಣವೇ ಮುಂದೆ ವಿಜಯನಗರವಾಗಿ ಮಾರ್ಪಟ್ಟಿತೆಂದು ಹಲವು ವಿದ್ವಾಂಸರ ಅಭಿಪ್ರಾಯ. ರಾಜ್ಯದಲ್ಲಿ ಅಲ್ಲಲ್ಲಿ ನೆಲೆವೀಡುಗಳನ್ನು ಸ್ಥಾಪಿಸಿ ದಕ್ಷಿಣ ಭಾರತವನ್ನೆಲ್ಲ ಒಂದುಗೂಡಿಸಿ ಅಜೇಯ ಸಾಮ್ರಾಜ್ಯದ ಹೊಂಗನಸನ್ನು ನನಸಾಗಿ ಮಾಡಲು ಅಹರ್ನಿಶ ದುಡಿಯುತ್ತಿದ್ದ.

ಫಿಯಾಸುದ್ದೀನ್ ಎಂಬುವನು 1334ರಲ್ಲಿ ಮಧುರೆಯಲ್ಲಿ ಪುಟ್ಟ ಸಂಸ್ಥಾನವೊಂದನ್ನು ಸ್ಥಾಪಿಸಿ ಸುಲ್ತಾನನಾಗಿದ್ದ. ಮಧುರೆಯ ಸುಲ್ತಾನ ತನ್ನ ಹಿಂದೂ ಪ್ರಜೆಗಳ ಬಗ್ಗೆ ಸಂಶಯದಿಂದ ಕೂಡಿ ಅವರನ್ನು ಹಿಂಸಿಸತೊಡಗಿದ. ಅವರನ್ನು ಈ ಉಪದ್ರವದಿಂದ ಪಾರು ಮಾಡಬೇಕೆಂಬ ಮನವಿಗಳು ಬಲ್ಲಾಳನಿಗೆ ತಲುಸಿದವು. ಸುಲ್ತಾನನನ್ನು ಶಿಕ್ಷಿಸಲು ಸುಮಾರು 80 ವರ್ಷದ ವೃದ್ಧ ಬಲ್ಲಾಳ ಅಪರಿಮಿತ ಸೈನ್ಯದೊಡನೆ ಮಧುರೆಯತ್ತ ನಡೆದ. ಕುಪ್ಪಂ, ಕಣ್ಣಾನೂರು ಎಂಬಲ್ಲಿ ಬಲ್ಲಾಳನ ಸೈನ್ಯಕ್ಕೂ ಸುಲ್ತಾನನ ಪಡೆಗೂ ಯುದ್ಧ ಸಂಘಟಿಸಿ ಸುಲ್ತಾನನ ಪಡೆ ಸಂಪೂರ್ಣವಾಗಿ ಸೋತಿತು. ಅಲ್ಲಿಂದ ಅದು ಪೂರ್ಣವಾಗಿ ನಿರ್ಗಮಿಸಲು 14 ದಿನಗಳ ಅವಧಿಯನ್ನು ಬೇಡಲಾಯಿತು. ಈ ಅವಧಿಯ ಮಧ್ಯದಲ್ಲಿ ಒಂದು ಮಧ್ಯಾಹ್ನದಂದು ಸುಲ್ತಾನ ಹೆಚ್ಚು ಸೈನ್ಯದೊಂದಿಗೆ ಅಲ್ಲಿಗೆ ಬಂದು, ಹೊಯ್ಸಳ ಸೈನ್ಯ ಅಜಾಗರೂಕತೆಯಿಂದಿದ್ದ ವೇಳೆಯಲ್ಲಿ ಅದರ ಮೇಲೆರಗಿದ. ದಿಗ್ಬ್ರಮೆಗೊಂಡ ಬಲ್ಲಾಳ ಸೈನ್ಯ ದಿಕ್ಕಾಪಾಲಾಗಿ ಓಡಿತು. ಬಲ್ಲಾಳ ಸೆರೆಯಾದ. ಅವನನ್ನು ಮಧುರೆಗೆ ಕರೆದುಕೊಂಡು ಹೋಗಲಾಯಿತು. ಮುಂದಿನ ದುರಂತವನ್ನು ಆ ವೇಳೆಗೆ ಅಲ್ಲಿಗೆ ಬಂದ ವಿದೇಶೀ ಸಂದರ್ಶನಕಾರ ಇಬ್ನ್‍ಬತೂತ ವರ್ಣಿಸಿದ್ದಾನೆ. ಬಲ್ಲಾಳನಿಂದ ಅಪರಿಮಿತ ಐಶ್ವರ್ಯವನ್ನು ಪಡೆದು ಸುಲ್ತಾನ ಹೊಯ್ಸಳ ಚಕ್ರವರ್ತಿಯ ಚರ್ಮಸುಲಿಸಿ ಕೊಲ್ಲಿಸಿದುದಲ್ಲದೆ ಆ ಚರ್ಮವನ್ನು ಮಧುರೆಯ ಕೋಟೆಯ ಗೋಡೆಯ ಮೇಲೆ ತನ್ನ ಶೌರ್ಯವನ್ನು ಪ್ರದರ್ಶಿಸಲು ಬಾವುಟದೋಪಾದಿಯಲ್ಲಿ ಹಾಕಿಸಿದ.

ಹೊಯ್ಸಳ ಸಾಮ್ರಾಜ್ಯ 3ನೆಯ ಬಲ್ಲಾಳನ ಕೊಲೆಯೊಡನೆ ಅಸ್ತಂಗತವಾಯಿತು. ಆದರೆ ಅವನ ಸಂಕಲ್ಪವಾದ ಪ್ರಬಲ ಸಾಮ್ರಾಜ್ಯ ಸ್ಥಾಪನೆ ಕೊನೆಗೊಳ್ಳಲಿಲ್ಲ. ಅದು ಆ ವೇಳೆಗೆ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯದಿಂದ ಪೂರ್ಣಗೊಂಡಿತು. ಅವನು ಕೈಗೆತ್ತಿಕೊಂಡಿದ್ದ, ಮಧುರೆಯ ಸುಲ್ತಾನನನ್ನು ಸದೆಬಡಿಯುವ ಕಾರ್ಯವನ್ನು ವಿಜಯನಗರದ ವೀರಕಂಪಣ್ಣ ಒಡೆಯರ್ ಮತ್ತು ಮಾರಪ್ಪ ಒಡೆಯರ್ ಪೂರ್ಣಗೊಳಿಸಿದರು.

ಬಲ್ಲಾಳ Iv: ಮೂರನೆಯ ವೀರಬಲ್ಲಾಳನ ಮಗ ವಿಜಯವಿರೂಪಾಕ್ಷ ಬಲ್ಲಾಳ. ಇವನು ತನ್ನ ತಂದೆಯ ಕೊಲೆಯಾದ ಅನಂತರ 1343ರಲ್ಲಿ ದೋರಸಮುದ್ರದಲ್ಲಿ ಸಿಂಹಾಸನಕ್ಕೆ ಬಂದ. ಇವನ ಕಾಲದ ಕೆಲವೇ ಶಾಸನಗಳು ಇವೆ. ಇವು 1346ರ ವೇಳೆಗೆ ಕೊನೆಗೊಳ್ಳುತ್ತವೆ. ಇವನ ಅಧಿಕಾರ ಹೇಗೆ ಕೊನೆಗೊಂಡಿತು ಮತ್ತು ಇವನ ಅಂತ್ಯ ಹೇಗಾಯಿತು ಎಂದು ತಿಳಿದುಬರುವುದಿಲ್ಲ. ಹೊಯ್ಸಳ ರಾಜ್ಯ ವಿಜಯನಗರ ಸಾಮ್ರಾಜ್ಯದಲ್ಲಿ ಸೇರಿಹೋಯಿತು.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ